ವೀರಶೈವ ಧರ್ಮ - 
	ಶೈವಧರ್ಮದ ವಿವಿಧ ಶಾಖೆಗಳಲ್ಲಿ ಒಂದು. ವೀರಶೈವಧರ್ಮ ಬಹುಮಟ್ಟಿಗೆ ಕರ್ನಾಟಕದಲ್ಲಿ ರೂಪುಗೊಂಡು ಅನಂತರ ನೆರೆಹೊರೆಯ ಪ್ರಾಂತಗಳಾದ ಆಂಧ್ರ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಗಡಿ ಪ್ರಾಂತಗಳನ್ನು ವ್ಯಾಪಿಸಿತು. ಅನೇಕ ವಿಚಾರಗಳಲ್ಲಿ ವೈದಿಕಧರ್ಮದಿಂದ ಭಿನ್ನವಾದ ವೀರಶೈವಧರ್ಮ ಕರ್ನಾಟಕದ ಜನಜೀವನ, ಸಂಸ್ಕøತಿ ಮತ್ತು ಸಾಹಿತ್ಯ ಇವುಗಳ ಮೇಲೆ ಆಳವಾದ ಪ್ರಭಾವ ಬೀರಿದೆ.

	ಉಳಿದ ಶೈವಧರ್ಮಗಳಂತೆ ವೀರಶೈವ ಶಿವಾಗಮಗಳ ತಳಹದಿಯ ಮೇಲೆ ರೂಪಿತವಾದ ಒಂದು ಧರ್ಮ. ಸೂಕ್ಷ್ಮಾಗಮ, ಸುಪ್ರಭೇದ, ಸ್ವಾಯಂಭವ, ಕಾರ್ಮಿಕ, ವಾತುಲ ಮೊದಲಾದ ಆಗಮಗಳಲ್ಲಿ ವೀರಶೈವ ಧರ್ಮದ ಮೂಲ ತತ್ತ್ವಗಳು ಕಾಣಲು ಸಿಕ್ಕುತ್ತವೆ. ಇವೇ ಅಲ್ಲದೆ ಶಿವಯೋಗಿ ಶಿವಾಚಾರ್ಯರ ಸಿದ್ಧಾಂತಶಿಖಾಮಣಿ, ಶ್ರೀಪತಿ ಪಂಡಿತರ ಶ್ರೀಕರಭಾಷ್ಯ, ಸ್ವಭಾನಂದ ಶಿವಾಚಾರ್ಯವಿರಚಿತ ಶಿವಾದ್ವೈತಮಂಜರಿ ಮುಂತಾದ ಸಂಸ್ಕøತಗ್ರಂಥಗಳಲ್ಲಿ ವೀರಶೈವ ವನಚಕಾರರಿಗಿಂತಲೂ ಮೊದಲೇ ಈ ಧರ್ಮ ಪ್ರತಿಪಾದಿತವಾಗಿದ್ದಿತೆಂದು ಹೇಳಿದೆ. ಹನ್ನೆರಡನೆಯ ಶತಮಾನದಲ್ಲಿ ಬಂದ ಬಸವಾದಿ ಪ್ರಮಥರ ವಚನ ಸಾಹಿತ್ಯವನ್ನು ಆಧರಿಸಿ ಸಂಪಾದಿತವಾದ ಹಾಗೂ ರೂಪತಳೆದ ಶೂನ್ಯ ಸಂಪಾದನೆ, ಲಿಂಗಲೀಲಾವಿಲಾಸ, ಶಿವತತ್ತ್ವಚಿಂತಾಮಣಿ, ವೀರಶೈವಾ ಮೃತ ಮಹಾ ಪುರಾಣ ಮುಂತಾದ ಕನ್ನಡಗ್ರಂಥಗಳು ವೀರಶೈವಧರ್ಮ ವನ್ನು ವ್ಯವಸ್ಥಿತ ರೀತಿಯಲ್ಲಿ ವಿವರಿಸಲು ಶಕ್ತವಾಗಿವೆ.

	ವೀರಶೈವಧರ್ಮ ಶಾಸ್ತ್ರಾಧಾರಗಳನ್ನು ಗೌರವಿಸುವುದಾದರೂ ಇದಕ್ಕೆ ಯಾವುದೇ ಒಂದು ನಿರ್ದಿಷ್ಟ ಪ್ರಸ್ಥಾನ ಗ್ರಂಥ ಆಧಾರವಲ್ಲ. ಶಬ್ದ ಪ್ರಮಾಣದ ಹೆಸರಿನಲ್ಲಿ ವಿಚಾರ ಮತ್ತು ಅನುಭವಾತ್ಮಕವಾಗಿ ಸದಾ ವಿನೂತನಗೊಂಡು ಬರುತ್ತಿರುತ್ತದೆ. ಅನುಭವಮಾನ್ಯವಲ್ಲದ ಆಚರಣೆ, ಅದಕ್ಕೆ ಎಷ್ಟೇ ಶಾಸ್ತ್ರ ಆಧಾರವಿದ್ದರೂ ಅದನ್ನು ಗೌರವಿಸಲು ವೀರಶೈವ ಧರ್ಮ ಸಿದ್ಧವಿಲ್ಲ. ಲೌಕಿಕಪ್ರಜ್ಞೆ ಅನುಭವದಿಂದ ದೊರೆಯುವು ದಾದರೆ, ಅಲೌಕಿಕ ಅಥವಾ ದೈವಿಕ ಪ್ರಜ್ಞೆ ಅನುಭಾವದಿಂದ ಲಭಿಸುವಂಥದು.

	ವೀರಶೈವದರ್ಶನವನ್ನು ಶಕ್ತಿವಿಶಿಷ್ಟಾದ್ವೈತಸಿದ್ಧಾಂತ ಎಂದು ಕರೆಯಲಾಗಿದೆ. ಈ ಧರ್ಮದ ಪ್ರಕಾರ ಶಕ್ತಿಯುತನಾದ ಶಿವನೊಬ್ಬನೇ ಸತ್ಯ. ವಿಶ್ವದ ಸಕಲ ಪದಾರ್ಥಗಳೂ ಅವನ ಶಕ್ತಿಯ ವಿಕಾಸದಿಂದ ಸಾಧ್ಯಗೊಂಡಿದೆ. ವಿಶ್ವದ ವಿಕಾಸ ಪರಶಿವನ ಒಂದು ಲೀಲೆ. ಲೀಲೆಯಾದೊಡೆ ಉಮಾಪತಿ, ಲೀಲೆ ತಪ್ಪಿದೊಡೆ ಸ್ವಯಂಭು, ಶಿವನ ಲೀಲೆಯಿಂದ ಈ ವಿಶ್ವ. ಅಂದಮೇಲೆ ಅವನ ಲೀಲೆಗೆ ಬೇರೆ ಕಾರಣ ಬೇಕಿಲ್ಲ. ವೀರಶೈವಸಿದ್ಧಾಂತದ ಪರಶಿವ ಶಂಕರಾಚಾರ್ಯರ ಬ್ರಹ್ಮನಂತೆ ನಿರ್ಗುಣನಲ್ಲ. ಶಕ್ತಿಯುಕ್ತನಾದ ಶಿವ ಸದಾ ಸಗುಣನೇ ಆಗಿದ್ದು, ಲೀಲೆಗಾಗಿ ಬೇಕೆಂದಾಗ ತನ್ನ ಶಕ್ತಿಯನ್ನು ವಿಕಾಸಗೊಳಿಸಬಹುದು ಇಲ್ಲವೆ ಸಂಕೀರ್ಣಗೊಳಿಸಿ ಅಚಲನಾಗಿ ನಿರಂಜನನಾಗಿರಬಹುದು. ಶಿವನಿಗೆ ಅವನ ನೆನಹೇ ಶಕ್ತಿ. ಅವನ ಈ ಶಕ್ತಿ ಅದ್ವೈತದಲ್ಲಿ ಕಾಣುವ ಮಾಯೆಯಂತೆ ಅನಿತ್ಯವಾದದ್ದಲ್ಲ.

	ಶಿವನ ಹೊರತು ಅನ್ಯಸತ್ಯವಿಲ್ಲ ಎಂದಾದಮೇಲೆ ವೀರಶೈವಧರ್ಮದ ಪ್ರಕಾರ ಶಿವನೇ ಜೀವನಾಗುತ್ತಾನೆ. ಲಿಂಗ ಎಂಬುದು ಶಿವನಿಗೂ ಅಂಗ ಎಂಬುದು ಜೀವನಿಗೂ ಈ ಧರ್ಮದಲ್ಲಿ ಬಳಸಿರುವ ಪರ್ಯಾಯ ಪದಗಳು. ಶಿವನ ಶಕ್ತಿಯ ವಿಕಾಸದಿಂದ ಈ ಪ್ರಪಂಚ ಶಿವಮಯವಾದದ್ದು. ಆದ್ದರಿಂದ ಇದರಲ್ಲಿ ಯಾವುದೂ ಮಾಯೆಯಲ್ಲ. ಶಿವನ ಲೀಲಾಪ್ರಪಂಚದಲ್ಲಿ ಜೀವ ಕ್ರಿಯಾಶೀಲವಾಗಿ ಆಸ್ಥೆಯಿಂದ ಭಾಗಿಯಾಗಬೇಕು. ಶಕ್ತಿಯ ಉತ್ಕರ್ಷದಲ್ಲಿ ಶಿವ ತನ್ನನ್ನು ಮರೆತು ಮಾನವನಾಗಿದ್ದಾನೆ. ಆದ್ದರಿಂದ ಪುನಃ ತನ್ನನ್ನು ಅರಿತು ಶರಣಾಗಬೇಕು. ಆದ್ದರಿಂದ ವಿಶ್ವದ ಆಗುಹೋಗುಗಳಿಂದ ದೂರವಿದ್ದು, ಸಂನ್ಯಾಸದ ಹೆಸರಿನಲ್ಲಿ ದೈನಂದಿನ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ಲಕ್ಷ್ಯಿಸುವುದು ಇವರಿಗೆ ಸರಿಕಾಣಲಿಲ್ಲ. ಅದಕ್ಕೆ ಬದಲಾಗಿ ಶಕ್ತಿಯಿಂದ ರೂಪಿತಗೊಂಡ ಈ ವಿಶ್ವದ ಕ್ರಿಯಾ ವಿಧಾನವನ್ನರಿತು ಕೊನೆಗೆ ಅದನ್ನು ಜಯಿಸಿ ನಿಲ್ಲಬೇಕೆಂಬುದೇ ವೀರಶೈವ ಧರ್ಮದ ಮೂಲಧ್ಯೇಯ. ತನ್ನ ಶಕ್ತಿಗೆ ಅಧೀನನಾಗಿ ತಾನೇ ಜೀವನಾಗಿರುವ ಶಿವನು ತನ್ನ ಶಕ್ತಿಯನ್ನು ಜಯಿಸಿ ತನ್ನ ವಿಭುತ್ವವನ್ನು ತಾನರಿಯುವನು.

	ಲಿಂಗಾಂಗ ಸಾಮರಸ್ಯವನ್ನು ಸಾಧ್ಯಗೊಳಿಸಲು ಬೇಕಾದ ಸಾಧನ ಮಾರ್ಗ ಈ ಧರ್ಮದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪಂಚಾಚಾರ ಮತ್ತು ಅಷ್ಟಾವರಣಗಳಿಂದ ಪೋಷಿತವಾದ ಷಟ್‍ಸ್ಥಲಸಿದ್ಧಾಂತವೇ ವೀರಶೈವ ಸಾಧನಮಾರ್ಗ. ಈ ಮಾರ್ಗದಲ್ಲಿ ಭಕ್ತಿ, ಜ್ಞಾನ, ಧ್ಯಾನ, ಕರ್ಮ ಮತ್ತು ನೀತಿಯ ಆಚರಣೆಗೆ ಸಮಾನಾವಕಾಶವಿದೆ. ವ್ಯಕ್ತಿಯ ಅಂತರಂಗ-ಬಹಿರಂಗ ಜೀವನದ ಪರಿಶುದ್ಧತೆ ಸತ್ಯದ ಸಾಕ್ಷಾತ್ಕಾರಕ್ಕೆ ಅತ್ಯಾವಶ್ಯಕ ಎಂಬುದು ಇವರ ನಿಲವು. ಜೈನ, ಬೌದ್ಧ ಧರ್ಮಗಳೂ ಸೇರಿದಂತೆ ಎಲ್ಲ ಭಾರತೀಯ ಧರ್ಮಗಳಲ್ಲಿಯೂ ಮಾನ್ಯವೆನಿಸಿದ ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ ಮುಂತಾದ ನೈತಿಕ ಆಚರಣೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿ, ಅವುಗಳನ್ನು ಜನಸಾಮಾನ್ಯರೂ ಅರಿತು ಆಚರಿಸುವಂತೆ ಈ ಧರ್ಮದಲ್ಲಿ ಅಳವಡಿಸಲಾಗಿದೆ. ಲಿಂಗಾಚಾರ, ಶಿವಾಚಾರ, ಸದಾಚಾರ, ಭೃತ್ಯಾಚಾರ, ಗಣಾಚಾರ ಎಂಬ ಪಂಚಾಚಾರಗಳಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ನೈತಿಕ ಹೊಣೆಗಾರಿಕೆಗಳ ಆಚರಣೆ ಅಳವಟ್ಟುನಿಂತಿದೆ. ನೀರಿನಲ್ಲಡಗಿರುವ ಅಗ್ನಿಯಂತೆ, ಜೀವನಲ್ಲಡಗಿರುವ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧಕನಿಗೆ ಅಷ್ಟಾವರಣ ರಕ್ಷಾಕವಚವಿದ್ದಂತೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷ, ಮಂತ್ರ-ಇವು ಸಾಧನೆಗೆ ಬೇಕಾದ ಸಹಕಾರಿ ತತ್ತ್ವಗಳು. ಮಿಕ್ಕ ಯಾವ ಶೈವಧರ್ಮದಲ್ಲಿಯೂ ಇಲ್ಲದೆ ವೀರಶೈವರಲ್ಲಿ ಮಾತ್ರವೇ ಆಚರಣೆಯಲ್ಲಿರುವ ಲಿಂಗಧಾರಣೆ ಅಂದರೆ, ಅಂಗದ ಮೇಲೆ ಲಿಂಗವನ್ನು ಸದಾ ಧರಿಸುವ ಕ್ರಮ ಸಾಧಕನ ದೃಷ್ಟಿಯಿಂದ ಬಹು ಅರ್ಥಪೂರ್ಣವಾದದ್ದು. ಶಿವಸ್ವರೂಪಿಯಾದ ಗುರು ಅಂಗನೆನಿಸಿದ ಜೀವನಿಗೆ ಲಿಂಗತತ್ತ್ವ ಅಂದರೆ, ಶಿವತತ್ತ್ವನ್ನು ಉಪದೇಶಿಸಿ, ಅಂಗನಲ್ಲಿ ಅಮೂರ್ತವಾಗಿ ಅಡಗಿದ್ದ ಶಿವಕಲೆಯನ್ನು ಮೂರ್ತಗೊಳಿಸಿ, ಸಾಧಕನ ಸ್ಥೂಲದೇಹದ ಮೇಲೆ ಅದನ್ನು ಸ್ಥಾಪಿಸಿ, ಅವನ ಸಾಧನೆಗೆ ನೆರವಾಗುತ್ತಾನೆ. ಅಮೂರ್ತವಾಗಿ ಅಂಗನಲ್ಲಡಗಿದ್ದ ಶಿವಕಲೆ ಅಥವಾ ಚಿತ್ಕಲೆಯನ್ನು ಲಿಂಗರೂಪದಲ್ಲಿ ಮೂರ್ತಗೊಳಿಸಿದ ಅಂಗನಿಗೆ ಲಿಂಗಧಾರಣೆ ಮಾಡಿ ಸಾಧಕನಲ್ಲಿ ಚಿತ್‍ಶಕ್ತಿಯನ್ನು ಜಾಗೃತಗೊಳಿಸುವ ಈ ಧಾರ್ಮಿಕ ಕ್ರಿಯೆಯಲ್ಲಿ ಒಂದು ರೀತಿಯ ಯೋಗಸಾಧನೆಯ ಅಂಶ ಅಡಗಿದೆ. ಗುರುವಿನಿಂದ ಅನುಗ್ರಹವಾದ ಈ ಲಿಂಗದ ಉಪಾಸನೆಗೆ ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷಿ, ಮಂತ್ರ - ಇವು ಕೇವಲ ಸಹಕಾರಿಗಳು.

	ಧಾರ್ಮಿಕ ಸಲಕರಣೆ ಮತ್ತು ನೈತಿಕ ಸಿದ್ಧತೆಯೊಂದಿಗೆ ಶಿವೋಪಾಸಕ ಸಾಗುವಾಗ ಷಟ್‍ಸ್ಥಲಗಳೆಂಬ ಆರು ಮಜಲುಗಳನ್ನು ಏರಿ ಶೂನ್ಯತೆಯ ಪರಮಪದವನ್ನು ಸಂಪಾದಿಸುತ್ತಾನೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬವೇ ಆ ಷಟ್‍ಸ್ಥಲಗಳು. ಲಿಂಗ ಮತ್ತು ಅಂಗ ಅಥವಾ ಶಿವ ಮತ್ತು ಜೀವ ಇವರ ನಡುವೆ ಭೇದ ಸಹಜವೆಂಬಂತೆ ಕಾಣುವ ಭಕ್ತಸ್ಥಲದಿಂದ ಮೊದಲಾಗಿ ಹಂತಹಂತ ವಾಗಿ ಶ್ರದ್ಧಾಭಕ್ತಿ, ನಿಷ್ಠಾಭಕ್ತಿ, ಅವಧಾನಭಕ್ತಿ, ಅನುಭವಭಕ್ತಿ, ಆನಂದ ಭಕ್ತಿ ಮುಂತಾದ ಸೋಪಾನಗಳನ್ನು ದಾಟಿ ಕೊನೆಗೆ ಸಮರಸಭಕ್ತಿಯಲ್ಲಿ ಲಿಂಗಾಂಗಗಳ ಐಕ್ಯ ಸಾಧ್ಯವಾಗುತ್ತದೆ. ಷಟ್‍ಸ್ಥಲೋಪಾಸನೆಯಲ್ಲಿ ಬಹಿರಂಗದಲ್ಲಿ ಕಾಣುವ ಆಚರಣೆಗಳಿಗಿಂತಲೂ ಅಂತರಂಗದಲ್ಲಿ ಅನುಭವಿಸುವ ಭಾವಕ್ಕೆ ಹೆಚ್ಚು ಪ್ರಾಧಾನ್ಯ. ನಾದವೇದಗಳಿಗಿಂತ ಹೆಚ್ಚಾಗಿ ಭಕ್ತಿ, ಜ್ಞಾನ ಮತ್ತು ಪರಿಶುದ್ಧ ಜೀವನದಿಂದ ಜೀವ ಪರಿಷ್ಕಾರವಾಗ ಬೇಕು ಎಂಬುದು ವೀರಶೈವ ಶರಣರ ಮತ. ಜಗವೆಲ್ಲವೂ ಶಿವಮಯವಾ ದ್ದರಿಂದ ಕಾಯವನ್ನು ದಂಡಿಸಿ ಕಾಯಕಮಾಡಿ ಇಂದಿಗೆಂದು ನಾಳೆಗೆಂದು ಸಂಗ್ರಹಿಸದೆ ಗುರುಲಿಂಗಜಂಗಮಸೇವೆಯನ್ನು ಮಾಡುತ್ತ ದಾಸೋಹಭಾವ ದಿಂದ ಬದುಕುವುದೇ ಇವರ ಪ್ರಕಾರ ನಿಜವಾದ ಧರ್ಮೋಪಾಸನೆ. ಕಾಯಕದಿಂದ ಕೈಲಾಸ ಎಂಬುದು ಇವರ ಧಾರ್ಮಿಕ ಅಭಿಮತ.

	ಧಾರ್ಮಿಕ ರಂಗದಲ್ಲಿ ಮಾನವರೆಲ್ಲರೂ ಸಮಾನರು. ಭಗವಂತನ ಸಾಕ್ಷಾತ್ಕಾರ ಮಾನವನ ಹಕ್ಕು ಎಂದು ಬೋಧಿಸಿದ ವೀರಶೈವಧರ್ಮ ಹನ್ನೆರಡನೆಯ ಶತಮಾನದಲ್ಲಿ ಬಂದ ಶರಣಸಂತತಿಯಿಂದಾಗಿ ಕರ್ನಾಟಕದಲ್ಲಿ ಸುವರ್ಣ ಯುಗವನ್ನೇ ಕಂಡಿತು. ಸ್ಪøಶ್ಯ-ಅಸ್ಪøಶ್ಯ, ಬ್ರಾಹ್ಮಣ-ಶೂದ್ರ, ಸ್ತ್ರೀ-ಪುರುಷ ಎಂಬ ಯಾವ ಭೇದವೂ ಇಲ್ಲದೆ ಪಂಡಿತಪಾಮರರೆಲ್ಲರೂ ಈ ಧರ್ಮದ ಬೋಧನೆಗೆ ಕಿವಿಗೊಟ್ಟರು. ವರ್ಣಾಶ್ರಮ ಧರ್ಮಗಳ ಹೆಸರಿನಲ್ಲಿ ಹಿಂದು ಸಮಾಜದಲ್ಲಿ ರೂಢಿ ಯಲ್ಲಿದ್ದ ಮೇಲು-ಕೀಳು ಎಂಬ ಸಾಮಾಜಿಕ ತರತಮ ಮಾಯವಾಗಿ ಶರಣ ಧರ್ಮದ ನೆರಳಿನಲ್ಲಿ ವರ್ಣರಹಿತ, ವರ್ಗರಹಿತ, ಧಾರ್ಮಿಕ ತೃಷೆಯುಳ್ಳ ಸಮಾಜವೊಂದು ರೂಪಿತಗೊಂಡಿತು. ಧರ್ಮದ ಹೆಸರಿನ ಲ್ಲಿದ್ದ ಅಂಧಶ್ರದ್ಧೆ, ಶುಷ್ಕ ಆಚರಣೆಗಳು, ಆಡಂಬರದ ಪೂಜೆ, ಪಶುಬಲಿ ಮುಂತಾದ ಕುರುಡು ಆಚರಣೆಗಳನ್ನು ವೀರಶೈವಧರ್ಮ ಅತ್ಯಂತ ಕಟುವಾಗಿ ಟೀಕಿಸಿತು. ತನ್ನ ಬಿಟ್ಟರೆ ದೇವರಿಲ್ಲ, ಮಣ್ಣ ಬಿಟ್ಟರೆ ಮಡಕೆ ಇಲ್ಲ ಎಂಬ ಶ್ರೇಷ್ಠ ತತ್ತ್ವ ಸುಲಭಸಾಧ್ಯ ಎಂದು ಜೀವಂತವಾಗಿ ಬದುಕಿ ತೋರಿಸಿದುದೇ ಈ ಧರ್ಮದ ವಿಶಿಷ್ಟತೆ. ಧಾರ್ಮಿಕ ಆಚರಣೆ, ಪರಿಶುದ್ಧಜೀವನ ಮತ್ತು ವೈಚಾರಿಕಸ್ವಾತಂತ್ರ್ಯ ಇವು ಜೊತೆಗೂಡಿ ಹೋಗಬಲ್ಲವೆಂಬುದನ್ನು ವೀರಶೈವಧರ್ಮ ಸಾಧಿಸಿ ತೋರಿಸಿತು.

	ಕರ್ನಾಟಕದಲ್ಲಿ ಈ ಧರ್ಮಕ್ಕೆ ಹೆಚ್ಚಿನ ಪುಷ್ಟಿ ದೊರಕಿದ್ದು ಅಂದಿನ ವಚನಕಾರರಿಂದ. ಅಲ್ಲಮಪ್ರಭು, ಬಸವಣ್ಣ, ಸಿದ್ಧರಾಮ, ಅಕ್ಕಮಹಾದೇವಿ ಮೊದಲಾದವರು ರಚಿಸಿದ ವಚನಗಳು ಮತ್ತು ಅವರು ಕಟ್ಟಿದ ಅನುಭವಮಂಟಪದ ವಿಚಾರಗೋಷ್ಠಿಗಳು ಒಂದು ಕಡೆ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ಒದಗಿಸಿದ್ದಲ್ಲದೆ ವೀರಶೈವಧರ್ಮದ ಅಪರೂಪ ತತ್ತ್ವಗಳು ಜನಸಾಮಾನ್ಯರಿಗೂ ನಿಲುಕುವಂಥ ಸನ್ನಿವೇಶ ಇದರಿಂದಾಗಿ ಒದಗಿಬಂತು. ಕಾಯಕವೇ ಕೈಲಾಸ ಎಂಬುದರ ಅರ್ಥ ಎಲ್ಲರಿಗೂ ಸ್ಪಷ್ಟವಾಯಿತು. ಲಿಂಗಪೂಜೆಗಿಂತ ಜಂಗಮಾತಿಥ್ಯ ಮುಖ್ಯವೆಂಬುದನ್ನು ಅರಿತರು. ದೀನ, ದಲಿತರು, ಕೆಳವರ್ಗದವರು ವೀರಶೈವಧರ್ಮದ ವಿಶಾಲಧೋರಣೆಯನ್ನು ಮೆಚ್ಚಿ ಅದನ್ನು ಅನುಮೋದಿಸಿದರು. ಆಚಾರಶೀಲ ಜೀವನ, ಸರಳ ಜೀವನ, ಸನ್ಮಾರ್ಗಪ್ರವರ್ತನೆ-ಇವಕ್ಕೆ ಪ್ರಾಶಸ್ತ್ಯ ಬಂತು. ಇದು ಅಂದು ನಡೆದ ಸಾಹಿತ್ಯಕ್ರಾಂತಿ, ವಿಚಾರಕ್ರಾಂತಿ ಎಂದು ಚರಿತ್ರೆಕಾರರು ಉಲ್ಲೇಖಿಸಿದ್ದಾರೆ.			
		(ಎ.ಎಲ್.ಎಸ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ